ಇತ್ತೀಚಿಗಷ್ಟೇ ಅಂದ್ರೆ ಏಪ್ರಿಲ್ 24 ರಂದು ಡಾಕ್ಟರ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನ ರಾಜ್ಯಾದ್ಯಂತ ಆಚರಿಸಲಾಗಿತ್ತು. ಕೋವಿಡ್ ನಿಂದಾಗಿ ಅಭಿಮಾನಿಗಳು ಸರಳವಾದ ರೀತಿಯಲ್ಲೇ ಸಂಭ್ರಮಿಸಿದ್ದರು. ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ, ರಸಿಕರ ರಾಜ, ಗಾನಗಂಧರ್ವ ಹೀಗೆ ಹೇಳುತ್ತಾ ಹೋದರೆ ಪದಗಳಿಗೂ ಸುಸ್ತಾಗುವುದು ಖಚಿತ, ಅಷ್ಟೊಂದು ಬಿರುದುಗಳನ್ನ ಅಣ್ಣಾವ್ರು ಪಡೆದುಕೊಂಡಿದ್ದಾರೆ. ಇಂದು ಅಣ್ಣಾವ್ರು ನಮ್ಮ ಜೊತೆ ಇಲ್ಲದೆ ಇರಬಹುದು, ಆದರೆ ಅವರು ನಟಿಸಿರುವ ಚಿತ್ರಗಳು ಎಂದಿಗೂ ಅಜರಾಮರ, ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಅಣ್ಣಾವ್ರು ಶಾಶ್ವತವಾಗಿ ನೆಲೆಸಿದ್ದಾರೆ. ವರ ನಟ ಡಾ. ರಾಜ್ ಅವರ ಅಭಿನಯದ ಕುರಿತು ನಿಮಗೆ ಹೆಚ್ಚು ಹೇಳಬೇಕಾಗಿಲ್ಲ. ಆದರೆ ಅಣ್ಣಾವ್ರು ಉನ್ನತ ಮಟ್ಟಕ್ಕೆ ಬೆಳೆಯುವುದಕ್ಕೆ ಇವರ ಸರಳತೆ, ವ್ಯಕ್ತಿತ್ವ ಮತ್ತು ಸಜ್ಜನತೆ ಪ್ರಮುಖ ಕಾರಣಗಳಾಗಿದ್ದವು ಎಂದರೆ ತಪ್ಪಾಗಲಾರದು. ಅಣ್ಣಾವ್ರು ನಿಜ ಜೀವನದಲ್ಲಿ ಎದುರಿಸಿದ ಸಂದರ್ಭಗಳ ಜೊತೆಗೆ ಬೆಸೆದಿರುವ ವ್ಯಕ್ತಿತ್ವ, ಮುಗ್ದತೆ, ನಮ್ರತೆಯ ಕುರಿತು ಹೇಳುತ್ತೇವೆ.
ಅಭಿಮಾನಿಗಳೇ ನಮ್ಮನೆ ದೇವ್ರು
ಒಂದು ದಿನ ಅಣ್ಣಾವ್ರನ್ನ ನೋಡಲು ಅಭಿಮಾನಿಯೊಬ್ಬರು ಡಾ ರಾಜ್ ಕುಮಾರ್ ಮನೆಗೆ ಬರುತ್ತಾರೆ. ಅಣ್ಣ ನಿಮ್ಮ ಅಭಿನಯಕ್ಕೆ ಸರಿ ಸಾಟಿ ಯಾರು ಇಲ್ಲ, ನೀವು ದೇವ್ರು ಅಂತ ಹೇಳಿ, ಡಾ ರಾಜ್ ಪಾದ ಮುಟ್ಟಿ ಅಲ್ಲಿಂದ ಹೊರಟು ಹೋಗುತ್ತಾರೆ. ನನ್ನಲ್ಲಿ ದೇವ್ರನ್ನು ಕಾಣುತಿದ್ದಾರೆ ಅಂದ್ರೆ, ನಾನಲ್ಲ ದೇವ್ರು ಆ ಅಭಿಮಾನಿಯೇ ನಿಜವಾದ ದೇವ್ರು ಎಂದು ಅಣ್ಣಾವ್ರು ನಿರ್ಧರಿಸುತ್ತಾರೆ. ಅಂದಿನಿಂದ ಯಾವುದೇ ಭಾಷಣ ಮಾಡುವ ಮೊದಲು ಡಾ.ರಾಜ್ ಅಭಿಮಾನಿ ದೇವರುಗಳೇ ಎಂದು ಹೇಳುವ ಮೂಲಕ ಮಾತು ಶುರು ಮಾಡುತ್ತಿದ್ದರು.
೨ ಅಭಿಮಾನಿಗೆ ಸ್ಪಂದಿಸಿದ ಗಾನಗಂಧರ್ವ
ಗಂಡು ಮೆಟ್ಟಿದ ನಾಡು ಹುಬ್ಬಳಿಯ ಚೆನ್ನಮ್ಮ ವೃತ್ತದಲ್ಲಿ, ಆಕಸ್ಮಿಕ ಚಿತ್ರದ ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಅಣ್ಣಾವ್ರನ್ನ ನೋಡಲು ಜನ ಸಾಗರವೇ ಹರಿದಿತ್ತು. ಪೊಲೀಸರು ಜನರನ್ನು ಕ್ಲಿಯರ್ ಮಾಡಿದ್ದು, ಡಾ.ರಾಜ್ ಕುಮಾರ್ ಅವರನ್ನ ಒಂದು ಹೋಟೆಲ್ ಗೆ ಕರೆದುಕೊಂಡು ಬರುತ್ತಾರೆ. ಅಷ್ಟೊಂದು ಜನಸಂದಣಿಯ ನಡುವೆ, ಒಬ್ಬ ಅಭಿಮಾನಿ ಗೋಡೆ ಹಾರಿ ಅಣ್ಣಾವ್ರ ಹತ್ತಿರ ಬಂದು, ಡಾ.ರಾಜ್ ಅಭಿನಯದ ಚಿತ್ರದ ಹಾಡುಗಳನ್ನ ಒಂದೇ ಉಸಿರಿನಲ್ಲಿ ಹಾಡಲು ಶುರು ಮಾಡಿದ್ದು, ಅಣ್ಣಾವ್ರು ಪುಟ್ಟ ಮಗುವಿನಂತೆ ಮೈ ಮರೆತು ಹಾಡನ್ನು ಕೇಳುತ್ತಾ ಕುಳಿತು ಬಿಟ್ಟಿದ್ದರಂತೆ. ಅಲ್ಲಿಯ ಜನರು ಸಾಕು ಬಿಡೋ ಹಾಡಿದ್ದೆ ಹಾಡನ್ನ ಎಷ್ಟು ಸಾರಿ ಹಾಡ್ತೀಯಾ ಎಂದು ಹೇಳಿದರು. ಆಗ ಡಾ.ರಾಜ್ ಅವರನ್ನು ಹಾಡಲು ಬಿಡಿ ಎಂದು ಹೇಳಿದ್ದು, ಕೊನೆಗೆ ಅಣ್ಣಾವ್ರು ಆ ಅಭಿಮಾನಿಗೆ ನೂರು ರೂಪಾಯಿ ಕೊಟ್ಟರು.
೩ ತ್ಯಾಗಮಯಿ
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ದೊರೆ ಭಗವಾನ್, ಮಂತ್ರಾಲಯ ಮಹಾತ್ಮೆ ಚಿತ್ರ ಮಾಡಬೇಕೆಂದು ಅಂದುಕೊಂಡಿದ್ದರು. ರಾಯರ ಪಾತ್ರಕ್ಕೆ ಡಾ.ರಾಜ್ ಕುಮಾರ್ ಅವರನ್ನ ಹಾಕಿಕೊಳ್ಳೋಣ ಎಂದು ನಿರ್ಣಯಿಸಿದ್ದರು. ಇದಕ್ಕೆ ಒಬ್ಬ ಅನ್ಯ ಜಾತಿಯ ಕಲಾವಿದರು ರಾಯರ ಪಾತ್ರ ಮಾಡುವಂತಿಲ್ಲ, ಮಾಡುವುದಾದರೆ ಬ್ರಾಹ್ಮಣ ಕಲಾವಿದರನ್ನ ಹಾಕಿಕೊಂಡು ಮಾಡಿ ಎಂದು ಜನರಿಂದ ಪತ್ರ ಬರಲು ಶುರುವಾಗಿತ್ತು. ಬೇಡ ಭಗವಾನ್ ಜನರ ವಿರುದ್ಧ ಹೋಗುವುದು ಯಾಕೋ ಸರಿ ಕಾಣಲ್ಲ, ನೀವು ಬೇರೆ ಕಲಾವಿದರನ್ನ ಹಾಕಿಕೊಂಡು ಈ ಸಿನಿಮಾ ಮಾಡಿ ಎಂದು ಅಣ್ಣಾವ್ರು ಹೇಳುತ್ತಾರೆ. ಒಂದು ಕೆಲಸ ಮಾಡೋಣ, ಚೀಟಿಯಲ್ಲಿ ಎಲ್ಲಾ ನಟರ ಹೆಸರನ್ನ ಬರೆದು ದೇವರ ಮುಂದೆ ಇಡೋಣ, ಚಿಕ್ಕ ಮಕ್ಕಳಿಂದ ಚೀಟಿ ತೆಗೆಯುವುದಕ್ಕೆ ಹೇಳೋಣ, ಅದರಲ್ಲಿ ಯಾರ ಹೆಸರು ಬರುತ್ತದೆಯೋ ಅವರೇ ರಾಯರ ಪಾತ್ರ ಮಾಡಲಿ ಎಂದು ಭಗವಾನ್ ಅಣ್ಣಾವ್ರಿಗೆ ಹೇಳುತ್ತಾರೆ. ಚೀಟಿಯಲ್ಲಿ ನಟಸಾರ್ವಭೌಮ ಡಾ.ರಾಜ್ ಕುಮಾರ್ ಹೆಸರು ಬರುತ್ತದೆ. ನೀವು ನನ್ನ ಹೆಸರು ಬರಬೇಕಂತ ಎಲ್ಲಾ ಚೀಟಿಯಲ್ಲೂ ನನ್ನ ಹೆಸರೇ ಬರೆದಿದ್ದೀರಾ ಎಂದು ಡಾ.ರಾಜ್ ಭಗವಾನ್ ಅವರಿಗೆ ಪ್ರಶ್ನಿಸಿದ್ದು, ಭಗವಾನ್ ಅವರು ಬೇರೆ ಬೇರೆ ಹೆಸರು ಬರೆದಿರುವುದನ್ನ ಅಣ್ಣಾವ್ರಿಗೆ ತೋರಿಸುತ್ತಾರೆ , ಆಗ ಡಾ. ರಾಜ್ ಗೆ ತೃಪ್ತಿ ಆಗುತ್ತದೆ.
ಈ ಸಿನಿಮಾದ ಚಿತ್ರೀಕರಣ ಮುಗಿಯುವವರೆಗೂ ನಾನು ಮಾಂಸವನ್ನ ಸೇವಿಸವುದಿಲ್ಲ, ಕಾಲಿಗೆ ಚಪ್ಪಲಿ
ಹಾಕುವುದಿಲ್ಲ ಎಂದು ಅಣ್ಣಾವ್ರು ಶಪಥ ಮಾಡುತ್ತಾರೆ. ಅಂದಿನಿಂದ ಡಾ.ರಾಜ್ ಕುಮಾರ್ ಗುರುರಾಯರ ಪರಮಭಕ್ತರಾಗುತ್ತಾರೆ.
೪ ಅಭಿಮಾನಿಗಳ ಮಾತಿನಂತೆ ನಡೆದುಕೊಂಡ ರಸಿಕರ ರಾಜ
ಡಾ ರಾಜ್ ಕುಮಾರ್ ಅವರು ಮದ್ಯ ಸೇವಿಸುವ ದೃಶ್ಯಗಳಲ್ಲಿ ನಟಿಸಿರುವುದು ಅತ್ಯಂತ ವಿರಳ. ಯಾವುದೋ ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ನಿಮ್ಮ ಅಭಿನಯ ನಾವು ಇಷ್ಟ ಪಡುತ್ತೇವೆ, ಆದರೆ ಮದ್ಯ ಸೇವನೆಯ ದೃಶ್ಯಗಳಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಜನರು ಅಣ್ಣಾವ್ರಿಗೆ ಪತ್ರ ಬರೆದಿದ್ದರು. ಇನ್ನು ಮುಂದೆ ನಾನು ಮದ್ಯ ಸೇವನೆ ಹಾಗು ಸಮಾಜಕ್ಕೆ ನಕಾರಾತ್ಮಕ ಸಂದೇಶ ತಲುಪಿಸುವ ಯಾವುದೇ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ದೃಢ ನಿರ್ಧಾರ ಮಾಡುತ್ತಾರೆ. ಅಂದಿನಿಂದ ಡಾ.ರಾಜ್ ಕುಮಾರ್ ಯಾವುದೇ ಮದ್ಯ ಸೇವನೆಯ ದೃಶ್ಯಗಳಲ್ಲಿ ನಟಿಸಲಿಲ್ಲ.

Comments